ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೇಶ್‌ಖಾಲಿ ಪ್ರಕರಣ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಸಿಬಿಐ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
Published : 8 ಜುಲೈ 2024, 10:42 IST
Last Updated : 8 ಜುಲೈ 2024, 10:42 IST
ಫಾಲೋ ಮಾಡಿ
Comments

ನವದೆಹಲಿ: ‘ಕೆಲವು ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯವು ಏಕೆ ಆಸಕ್ತಿ ವಹಿಸಬೇಕು’ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಭೂಕಬಳಿಕೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶಿಸಿದ್ದ ಕಲ್ಕತ್ತ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಸೋಮವಾರ ವಜಾಗೊಳಿಸಿತು.

‘ಇದು ಸಂದೇಶ್‌ಖಾಲಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ್ದಾಗಿದೆ. ನೀವು (ರಾಜ್ಯ ಸರ್ಕಾರ) ಸಂತ್ರಸ್ತರಿಗೆ ನ್ಯಾಯ ಒದಗಿಸಲು ತಿಂಗಳುಗಳ ಕಾಲ ಏನೂ ಮಾಡಿಲ್ಲ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್‌ ಅವರಿದ್ದ ಪೀಠವು ಬಂಗಾಳ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರಿಗೆ ಹೇಳಿತು.

ಸಂದೇಶ್‌ಖಾಲಿಯಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ದೌರ್ಜನ್ಯ ಹಾಗೂ ಜಮೀನು ಕಬಳಿಕೆ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕಲ್ಕತ್ತ ಹೈಕೋರ್ಟ್ ಏಪ್ರಿಲ್‌ 10ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು. 

‘ಸಿಬಿಐ ತನಿಖೆ ನಡೆಸುವಂತೆ ಕಲ್ಕತ್ತ ಹೈಕೋರ್ಟ್‌ ನೀಡಿರುವ ನಿರ್ದೇಶನವನ್ನು ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಎರಡು ಎಫ್‌ಐಆರ್‌ಗಳಿಗೆ ಸೀಮಿತಗೊಳಿಸಬಹುದು’ ಎಂದು ಸಿಂಘ್ವಿ ಅವರು ಪೀಠಕ್ಕೆ ತಿಳಿಸಿದರು.

‘ಹೈಕೋರ್ಟ್‌ ನೀಡಿರುವ ನಿರ್ದೇಶನವು ಪಡಿತರ ಹಗರಣಕ್ಕೂ ಅನ್ವಯವಾಗುತ್ತದೆ. ಆ ಹಗರಣಕ್ಕೆ ಸಂಬಂಧಿಸಿದಂತೆ 43 ಎಫ್‌ಐಆರ್‌ಗಳು ದಾಖಲಾಗಿವೆ’ ಎಂಬುದನ್ನು ಪೀಠದ ಗಮನಕ್ಕೆ ತಂದರು. 

‘ಎಫ್‌ಐಆರ್‌ಗಳನ್ನು ನಾಲ್ಕು ವರ್ಷಗಳ ಹಿಂದೆಯೇ ದಾಖಲಿಸಲಾಗಿದೆ. ಆರೋಪಿಗಳು ಯಾರು, ಬಂಧನ ಯಾವಾಗ ನಡೆದಿದೆ’ ಎಂದು ಪೀಠವು ಪ್ರಶ್ನಿಸಿತು. ‘ಯಾವುದೋ ವ್ಯಕ್ತಿಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ಏಕೆ ಆಸಕ್ತಿ ವಹಿಸಬೇಕು’ ಎಂದು ಕೇಳಿದ ಪೀಠ, ಅರ್ಜಿಯನ್ನು ತಿರಸ್ಕರಿಸಿರುವುವಾಗಿ ಹೇಳಿತು. 

ಹೈಕೋರ್ಟ್ ಆದೇಶವು ರಾಜ್ಯದ ಪೊಲೀಸ್ ಪಡೆ ಸೇರಿದಂತೆ ಇಡೀ ವ್ಯವಸ್ಥೆಯ ನೈತಿಕ ಸ್ಥೈರ್ಯವನ್ನು ಕುಂದಿಸಿದೆ ಎಂದು ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT