ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೆಬನಾನ್‌ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್‌ ಮೇಲೆ ಕ್ಷಿ‍ಪಣಿ ದಾಳಿ

Published : 6 ಅಕ್ಟೋಬರ್ 2024, 11:01 IST
Last Updated : 6 ಅಕ್ಟೋಬರ್ 2024, 11:01 IST
ಫಾಲೋ ಮಾಡಿ
Comments

ಬೈರೂತ್‌: ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ಭಾನುವಾರವೂ ಮುಂದುವರಿದಿದೆ. ಬೈರೂತ್‌ನ ದಕ್ಷಿಣ ಉಪನಗರದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.

ಈ ನಡುವೆ ಕದನ ವಿರಾಮಕ್ಕೆ ಇಸ್ರೇಲ್‌ ಮೇಲೆ ಒತ್ತಡ ಹಾಕಬೇಕು ಎಂದು ಲೆಬನಾನ್ ಪ್ರಧಾನಿ ನಜೀಬ್ ಮಿಕಾಟಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ವಾಯುದಾಳಿಯ ಪರಿಣಾಮ ಆಕಾಶದಲ್ಲಿ ಬೆಂಕಿಯ ಉಂಡೆಗಳು ಕಾಣಿಸಿಕೊಂಡಿದ್ದು, ಬೈರೂತ್‌ ನಗರವನ್ನು ಹೊಗೆ ಆವರಿಸಿಕೊಂಡಿತ್ತು.

ಹಿಜ್ಬುಲ್ಲಾ ಬಂಡುಕೋರರ ಗಟ್ಟಿ ನೆಲೆಯಾಗಿರುವ ದಕ್ಷಿಣ ಬೈರೂತ್‌ ಮೇಲೆ 30ಕ್ಕೂ ಅಧಿಕ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಒಂದು ಪೆಟ್ರೋಲ್ ಬಂಕ್ ಹಾಗೂ ವೈದ್ಯಕೀಯ ಸರಬರಾಜು ಉಗ್ರಾಣದ ಮೇಲೂ ದಾಳಿ ನಡೆದಿದೆ. ‘ದಾಳಿಯ ವೇಳೆ ಭೂಕಂಪವಾದಂತಾಯಿತು’ ಎಂದು ಅಂಗಡಿ ಮಾಲೀಕ 60 ವರ್ಷದ ಮೆಹದಿ ಝೈತರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ದಾಳಿಯಿಂದಾಗಿ ಬೈರೂತ್‌ನ ಜನವಸತಿ ಪ್ರದೇಶದ ಮೇಲೆ ಭಾರಿ ಪ್ರಮಾಣದ ಬೆಂಕಿಯುಂಡೆಗಳು ಕಾಣಿಸಿಕೊಂಡವು. ಅದರ ಬೆನ್ನಲ್ಲೇ ಭಾರಿ ಸ್ಫೋಟದ ಸದ್ದು ಕೇಳಿ ಬಂತು. ಇಡೀ ಪ್ರದೇಶ ಹೊಗೆಯಿಂದ ಆವೃತವಾಗಿತ್ತು.

ನಾಗರಿಕರಿಗೆ ಆಗುವ ಸಂಭವನೀಯ ಹಾನಿಯನ್ನು ತಪ್ಪಿಸಲು ಶಸ್ತ್ರಾಸ್ತ್ರ ಸಂಗ್ರಹ ಸೌಲಭ್ಯಗಳು ಮತ್ತು ಮೂಲಸೌಕರ್ಯ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಬೈರೂತ್ ಉಪನಗರದ ಸಬ್ರಾ ಪ್ರದೇಶದಲ್ಲಿ ಕೈಯಲ್ಲಿ ಚೀಲಗಳನ್ನು ಹಿಡಿದುಕೊಂಡಿರುವ ನೂರಾರು ಜನ ಕಾಲ್ನಡಿಗೆ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಪಲಾಯನ ಮಾಡುವ ದೃಶ್ಯಗಳೂ ಕಂಡು ಬರುತ್ತಿವೆ.

ಇನ್ನೊಂದೆಡೆ ಗಾಜಾದಲ್ಲೂ ಇಸ್ರೇಲ್ ಪಡೆಗಳ ಆಕ್ರಮಣ ಮುಂದುವರಿದಿದ್ದು, ಉತ್ತರ ಗಾಜಾದ ಜಬಾಲಿಯಾ ಪ್ರದೇಶದಲ್ಲಿ ವಾಯು ದಾಳಿ ನಡೆಸಿದೆ. ಅಲ್ಲಿ ಹಮಾಸ್‌ ಬಂಡುಕೋರರು ಮತ್ತೆ ಪುನರ್‌ನಿರ್ಮಾಣದಲ್ಲಿ ತೊಡಗಿದ್ದರಿಂದ ದಾಳಿ ನಡೆಸಿದ್ದಾಗಿ ಇಸ್ರೇಲ್ ತಿಳಿಸಿದೆ.

ಅಲ್ಲದೇ ಅಕ್ಟೋಬರ್‌ 7ರಂದು ಹಮಾಸ್ ದಾಳಿಗೆ ಒಂದು ವರ್ಷ ತುಂಬಲಿದ್ದು, ಭಾರಿ ಮುನ್ನೆಚ್ಚರಿಕೆಯಿಂದ ಇರುವುದಾಗಿ ಇಸ್ರೇಲ್ ತಿಳಿಸಿದೆ. ಹಮಾಸ್‌ನ ಈ ಅಪ್ರಚೋದಿತ ದಾಳಿಯೇ ಇಸ್ರೇಲ್–ಪ್ಯಾಲೆಸ್ಟೀನ್ ಯುದ್ಧಕ್ಕೆ ಮುನ್ನುಡಿ ಬರೆದಿತ್ತು.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT