ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಪಾಕ್‌ಗೆ ಭಾರತ

Published : 28 ಸೆಪ್ಟೆಂಬರ್ 2024, 4:48 IST
Last Updated : 28 ಸೆಪ್ಟೆಂಬರ್ 2024, 4:48 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.

ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಪಾಕಿಸ್ತಾನ ಮನದಟ್ಟು ಮಾಡಿಕೊಳ್ಳಬೇಕು ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಗೆ ಭಾರತದ ಕಾಯಂ ಮಿಷನ್‌ನ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್, 'ವಿಶ್ವಸಂಸ್ಥೆಯ ಅಧಿವೇಶನವು ನಗೆಪಾಟಲಿಗೆ ಗುರಿಯಾಗಿದೆ. ಮಿಲಿಟರಿಯಿಂದಲೇ ನಡೆಯುವ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹೆಸರುವಾಸಿಯಾಗಿರುವ, ಡ್ರಗ್ಸ್ ಮಾರಾಟ ಮತ್ತು ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದಿರುವ ದೇಶವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಮೇಲೆ ಆರೋಪ ಹೊರಿಸಲು ಧೈರ್ಯ ಮಾಡಿರುವುದು ವಿಷಾದನೀಯ' ಎಂದು ಹೇಳಿದ್ದಾರೆ.

'ಇಡೀ ಜಗತ್ತಿಗೆ ತಿಳಿದಿರುವಂತೆಯೇ ಪಾಕಿಸ್ತಾನವು ನೆರೆಹೊರೆಯ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನೇ ದಾಳವಾಗಿ ಬಳಸಿಕೊಂಡಿದೆ' ಎಂದು ಅವರು ಆರೋಪಿಸಿದ್ದಾರೆ.

'2001ರಲ್ಲಿ ಭಾರತದ ಸಂಸತ್ತಿನ ಮೇಲೆ ದಾಳಿ, ವಾಣಿಜ್ಯ ನಗರಿ ಮುಂಬೈ ಮೇಲಿನ 26/11ರ ದಾಳಿ, ಮಾರುಕಟ್ಟೆ, ತೀರ್ಥಯಾತ್ರೆಯ ಮೇಲೆ ಸರಣಿ ದಾಳಿಗಳನ್ನು ಪಾಕ್ ಪ್ರಾಯೋಜಿತ ಭಯೋತ್ಪಾದಕ ಗುಂಪುಗಳು ನಡೆಸಿವೆ' ಎಂದು ಅವರು ಉಲ್ಲೇಖಿಸಿದರು.

'ಪಟ್ಟಿ ಇನ್ನೂ ಉದ್ದವಾಗಿದೆ. ಅಂತಹ ದೇಶವು ಹಿಂಸೆಯ ಬಗ್ಗೆ ಎಲ್ಲಿಯಾದರೂ ಮಾತನಾಡುವುದು ಕೇವಲ ಬೂಟಾಟಿಕೆಯಾಗಿದೆ' ಎಂದು ಅವರು ಪ್ರತ್ಯುತ್ತರ ನೀಡಿದ್ದಾರೆ.

ವಿಶ್ವಸಂಸ್ಥೆಯ 79ನೇ ಅಧಿವೇಶನದಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, 'ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಏಕಪಕ್ಷೀಯ ಮತ್ತು ಕಾನೂನುಬಾಹಿರ ನಿಧಾರವನ್ನು ಭಾರತ ಹಿಂಪಡೆದುಕೊಳ್ಳಬೇಕು' ಎಂದು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT