ಕನಿಷ್ಠ ಪಕ್ಷ ಒಂದು ವಾರವಾದರೂ ಇಬ್ಬರು ಗಗನಯಾತ್ರಿಗಳು ಚಂದ್ರನ ಮೇಲೆ ತಂಗುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಮಾನವರು ಅಲ್ಲಿ ಕಾಯಂ ಆಗಿ ನೆಲೆಸುವ ಕಾರ್ಯಕ್ಕೆ ನೆರವಾಗುವುದು ಆರ್ಟೆಮಿಸ್ ಕಾರ್ಯಕ್ರಮದ ಉದ್ದೇಶಗಳಾಗಿವೆ.

ಇತ್ತೀಚಿನ ದಶಕಗಳಲ್ಲಿ ದೊಡ್ಡ ರಾಕೆಟ್ ವಾಹನಗಳು ತಮ್ಮ ‘ಪ್ರಯಾಣಿಕ’ರನ್ನು ಚಂದ್ರನತ್ತ ಹಾರಿಬಿಟ್ಟಿವೆ. ಆದರೆ ಈ ಪ್ರಯಾಣಿಕರೆಲ್ಲರೂ ಮಾನವನ ಪ್ರತಿನಿಧಿಗಳಾದ ರೋಬಾಟ್ ನೌಕೆಗಳೇ ಆಗಿವೆ. ಅದಕ್ಕೆ ನಮ್ಮ ಚಂದ್ರಯಾನ 1 ಮತ್ತು 2 ನೌಕೆಗಳನ್ನು ಕ್ರಮವಾಗಿ ಉಡಾಯಿಸಿದ ಪಿ. ಎಸ್. ಎಲ್. ವಿ. ಹಾಗೂ ಜಿ. ಎಸ್. ಎಲ್. ವಿ .ಮಾರ್ಕ್ 3 ರಾಕೆಟ್‌ಗಳು ಉತ್ತಮವಾದ ಉದಾಹರಣೆಯೆನ್ನಬಹುದು.

ಆದರೆ ಚಂದ್ರನತ್ತ ಮಾನವಪ್ರಯಾಣಿಕನನ್ನು ಉಡಾಯಿಸುವುದನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾದ ಬೃಹತ್ ರಾಕೆಟ್ ಒಂದು ತನ್ನ ಶಿರದ ಮೇಲೆ ‘ಆರ್ಟೆಮಿಸ್ 1’ ಎಂಬ ಅಂತರಿಕ್ಷನೌಕೆಯನ್ನು ಹೊತ್ತು ಅಮೆರಿಕದ ಕೆನಡಿ ಅಂತರಿಕ್ಷ ನಿಲ್ದಾಣದಲ್ಲಿ ತನ್ನ ಉಡಾವಣಾ ವೇದಿಕೆಯ ಮೇಲೆ ಭವ್ಯವಾಗಿ ಇತ್ತೀಚೆಗೆ, ಅಂದರೆ ಕಳೆದ ಆಗಸ್ಟ್‌ನ ಉತ್ತರಾರ್ಧದಲ್ಲಿ ನಿಂತಿತ್ತು. ಒಂದಲ್ಲಾ ಎರಡಲ್ಲಾ, ಮೂವತ್ತೆರಡು ಮಹಡಿಗಳಷ್ಟು ಎತ್ತರವಿದ್ದ ಆ ರಾಕೆಟ್‌ನ ಹೆಸರು ಉಪಗ್ರಹ ಉಡಾವಣಾ ವ್ಯವಸ್ಥೆ, ಸಂಕ್ಷಿಪ್ತವಾಗಿ ‘ಎಸ್ ಎಲ್ ಎಸ್’.

ಸುಮಾರು ಇದೇ ಬಗೆಯ ಉದ್ದೇಶವನ್ನು ಹೊಂದಿದ ಇಂತಹ ಒಂದು ದೈತ್ಯ ರಾಕೆಟ್ ನಿಂತದ್ದು ಐವತ್ತು ವರ್ಷಗಳ ಹಿಂದಷ್ಟೆ. ಅದೇ ಒಂದಲ್ಲ, ಎರಡಲ್ಲ, ಒಂಬತ್ತು ಬಾರಿ ಮಾನವನ್ನು ಚಂದ್ರನತ್ತ ಯಶಸ್ವಿಯಾಗಿ ಉಡಾಯಿಸಿದ ‘ಸ್ಯಾಟರ್ನ್-5’ ರಾಕೆಟ್ ವಾಹನ. ಸ್ಯಾಟರ್ನ್-5ಗಳ ಮೇಲಿದ್ದ ಅಪಾಲೋ ನೌಕೆಗಳಲ್ಲಿ ಕುಳಿತ ಒಟ್ಟು 27 ಅಮೆರಿಕದ ಗಗನಯಾತ್ರಿಗಳು 1968-72ರ ನಡುವೆ ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿಲೋಮೀಟರ್ ದೂರದಲ್ಲಿರುವ ಚಂದ್ರನತ್ತ ತೆರಳಿದರು. ಆ ಪೈಕಿ 12 ಮಂದಿ ಚಂದ್ರನ ಮೇಲೆ ವಿಹರಿಸಿ ಸುರಕ್ಷಿತವಾಗಿ ಹಿಂತಿರುಗಿದರು. ಅದಾದ ಐದು ದಶಕಗಳ ಬಳಿಕ ಮತ್ತೆ ಬೃಹತ್ ರಾಕೆಟ್ಟೊಂದರಲ್ಲಿ ಮಾನವರನ್ನು ಕೊಂಡೊಯ್ಯಬಲ್ಲ ನೌಕೆಯೊಂದನ್ನು ತಮ್ಮ ದೇಶದ ಅಂತರಿಕ್ಷ ಸಂಸ್ಥೆ ‘ನಾಸಾ’ ಚಂದ್ರನತ್ತ ಉಡಾಯಿಸುವ ಸಮಯ ಸನ್ನಿಹಿತವಾದಾಗ ಅಮೆರಿಕನ್ನರೂ ಸೇರಿದಂತೆ ಜಗತ್ತಿನಾದ್ಯಂತ ಅನೇಕರು ಸಹಜವಾಗಿಯೇ ಪುಲಕಿತರಾಗಿದ್ದರು. ಆದರೆ ಆಗಸ್ಟ್ 29ರಂದು ಭಾರತೀಯ ಕಾಲಮಾನ ಸಂಜೆ 6:03ಕ್ಕೆ ಜರುಗಬೇಕಾಗಿದ್ದ ಆರ್ಟೆಮಿಸ್ 1ರ ಉಡಾವಣೆ ಸೆಪ್ಟೆಂಬರ್ 3ಕ್ಕೆ ಮುಂದೂಡಲ್ಪಟ್ಟಾಗ ಅವರಿಗೆ ಸಹಜವಾಗಿಯೇ ನಿರಾಸೆಯಾಯಿತು. ಅದಾದ ಬಳಿಕ ಮತ್ತಷ್ಟು ಗಂಭೀರವಾದ ತಾಂತ್ರಿಕ ಕಾರಣ
ವೊಂದರಿಂದಾಗಿ ಆ ಯಾನ ಸೆಪ್ಟೆಂಬರ್ 3ರಂದು ಮತ್ತೆ ಮುಂದೂಡಲ್ಪಟ್ಟಿದೆ. ಇದರಿಂದಾಗಿ ಆರ್ಟೆಮಿಸ್ ಕಾರ್ಯಕ್ರಮದ ಮೊದಲ ನೌಕೆ ಚಂದ್ರನತ್ತ ತೆರಳುವುದು ಇನ್ನು ಕೆಲವು ವಾರಗಳ ನಂತರವೇ.

ಆರ್ಟೆಮಿಸ್ ನೌಕೆಯಲ್ಲಿ ಯಾನ ಮಾಡಲು ನಾಲ್ವರು ಗಗನಯಾತ್ರಿಗಳಿಗೆ ಅವಕಾಶವಿದೆ. ಆದರೆ ಈ ಬಾರಿ ಅದರಲ್ಲಿ ಮಾನವರ ಬದಲು ದೊಡ್ಡ ಬಟ್ಟೆಯ ಅಂಗಡಿಗಳ ಮುಂದೆ ನಿಲ್ಲಿಸಿರುವ ಬೊಂಬೆಗಳನ್ನು ಹೋಲುವ ಮೂರು ಮಾನವರೂಪದ ಬೊಂಬೆಗಳು (ಮ್ಯಾನಿಕ್ವಿನ್ಸ್) ಇದ್ದವು. ಇವುಗಳಲ್ಲಿ ಒಂದು ಗಂಡುಬೊಂಬೆಯಾಗಿದ್ದರೆ ಮತ್ತೆರಡು (ಕೈಕಾಲಿಲ್ಲದ!) ಹೆಣ್ಣುಬೊಂಬೆಗಳಾಗಿದ್ದವು.

ಆರ್ಟೆಮಿಸ್ ನೌಕೆಯ ಯಾನದ ವೇಳೆಯಲ್ಲಿ ಉಂಟಾಗುವ ವೇಗದ ಏರಿಳಿತಗಳು (ಆಕ್ಸಿಲರೇಷನ್ಸ್), ನೌಕೆಯ ಒಳಭಾಗದ ಉಷ್ಣತೆ, ಅಂತರಿಕ್ಷದಲ್ಲಿನ ಮಾರಕ ವಿಕಿರಣ (ರೇಡಿಯೇಷನ್) ಪರಿಸರ – ಇವುಗಳನ್ನು ದಾಖಲುಮಾಡಿಕೊಳ್ಳುವ ಅನೇಕ ಸಂವೇದಕಗಳನ್ನು ಆ ಮಾನವಬೊಂಬೆಗಳಲ್ಲಿ ಅಳವಡಿಸಲಾಗಿತ್ತು. ಇದು ಚಂದ್ರನತ್ತ ಆರ್ಟೆಮಿಸ್ ನೌಕೆಯ ಮೊದಲ ಯಾನವಾಗಿದ್ದರಿಂದ ಅದನ್ನು ಕೂಲಂಕಷವಾಗಿ ಪರೀಕ್ಷಿಸುವ ಅಗತ್ಯವಿದ್ದದ್ದೇ ಇದಕ್ಕೆ ಕಾರಣ.

ಆಗಸ್ಟ್ 29, ಇಲ್ಲವೇ ಸೆಪ್ಟೆಂಬರ್ 3ರಂದು ಆರ್ಟೆಮಿಸ್ 1 ಭೂಮಿಯಿಂದ ಹೊರಟಿದ್ದಲ್ಲಿ ಅದಾದ ಒಂದು ವಾರದ ನಂತರ ಅದು ಚಂದ್ರನನ್ನು ಸಮೀಪಿಸಿದಾಗ ಆ ನೌಕೆಯ ಹಿಂಭಾಗದಲ್ಲಿರುವ ದೊಡ್ಡ ರಾಕೆಟ್ ಯಂತ್ರವನ್ನು ಉರಿಸುವ ಮೂಲಕ ಅದರ ವೇಗಕ್ಕೆ ಕಡಿವಾಣ ಹಾಕಿ ಆ ನೌಕೆ ಚಂದ್ರನನ್ನು ಸುತ್ತುವಂತೆ ಮಾಡುವ ಕಾರ್ಯಕ್ರಮವಿತ್ತು. ಕೆಲಕಾಲದ ನಂತರ ಅಂತಿಮವಾಗಿ ಆ ನೌಕೆ ಭೂಮಿಗೆ ಕಾಣದ ಚಂದ್ರನ ‘ಹಿಂಭಾಗ’ದ ಮೇಲ್ಮೈಯಿಂದ ಅರವತ್ತು ಸಾವಿರ ಕಿಲೋಮೀಟರ್ ದೂರಕ್ಕೆ ಧಾವಿಸಿ ಒಂದು ದಾಖಲೆಯನ್ನು ನಿರ್ಮಿಸಬೇಕಿತ್ತು. ಇದುವರೆಗೂ ಮಾನವರನ್ನು ಹೊತ್ತೊಯ್ಯಬಲ್ಲ ಯಾವುದೇ ನೌಕೆ ಚಂದ್ರನಿಂದ ಇಷ್ಟು ದೂರ ತೆರಳಿಲ್ಲ. ಇದಕ್ಕೆ ಹೋಲಿಸಿದಲ್ಲಿ ಐವತ್ತೆರಡು ವರ್ಷಗಳ ಹಿಂದೆ ಮೈ ನಡುಗಿಸುವಂತಹ ಅಪಾಯಕ್ಕೆ ಸಿಲುಕಿಕೊಂಡು ಭೂಮಿಗೆ ಸುರಕ್ಷಿತವಾಗಿ ಮರಳುವ ಕಾರ್ಯದಲ್ಲೇ ಮಗ್ನರಾಗಿದ್ದ ಅಪಾಲೋ 13ರ ಮೂವರು ಗಗನಯಾತ್ರಿಗಳು ಚಂದ್ರನ ಹಿಂಭಾಗದ ಮೇಲೆ ಸುಮಾರು 254 ಕಿಲೋಮೀಟರ್ ಎತ್ತರದಲ್ಲಿ ಹಾದುಹೋಗಿದ್ದರಷ್ಟೆ.

ಚಂದ್ರನ ಸಮೀಪದಲ್ಲಿದ್ದಾಗ ಆರ್ಟೆಮಿಸ್ 1
ಹತ್ತು ಪುಟ್ಟ ‘ಕ್ಯೂಬ್ ಸ್ಯಾಟ್’ಗಳನ್ನು ಉಡಾಯಿಸಲಿತ್ತು. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ನಿರ್ಮಾಣವಾದ ಆ ಅತ್ಯಂತ ಪುಟ್ಟ ಉಪಗ್ರಹಗಳ ಉದ್ದೇಶ ತಂತ್ರಜ್ಞಾನಗಳ ಪರೀಕ್ಷೆ ಹಾಗೂ ವೈಜ್ಞಾನಿಕ ಸಂಶೋಧನೆಗಳಾಗಿವೆ. ಇಂದು ಇಂತಹ ಪುಟ್ಟ ಉಪಗ್ರಹಗಳು ಅನೇಕ ಅದ್ಭುತವಾದ ಕಾರ್ಯಗಳನ್ನು ನಿರ್ವಹಿಸಿ ಮಾನವನಿಗೆ ನೆರವಾಗುತ್ತಿವೆ. ಹೀಗೆ ಚಂದ್ರನನ್ನು ಕೆಲಕಾಲ ಸುತ್ತಿದ ನಂತರ ಆರ್ಟೆಮಿಸ್ 1 ಭೂಮಿಯತ್ತ ಮರುಪಯಣವನ್ನು ಕೈಗೊಳ್ಳಬೇಕಿತ್ತು. ಚಂದ್ರನಿಂದ ವಿಮೋಚನೆ ಹೊಂದಿದ ಸುಮಾರು ಒಂದು ವಾರದ ನಂತರ ಭೂಮಿಯನ್ನು ಸಮೀಪಿಸುವ ಆರ್ಟೆಮಿಸ್ 1 ಗಂಟೆಗೆ ನಲವತ್ತು ಸಾವಿರ ಕಿಲೋಮೀಟರ್ ವೇಗದಲ್ಲಿ ಭೂವಾತಾವಣವನ್ನು ಪ್ರವೇಶಿಸಲಿತ್ತು. ನಂತರ ವಾತಾವರಣದ ಗಾಳಿಯ ಅಣುಗಳ ಜೊತೆ ಉಂಟಾಗುವ ಘರ್ಷಣೆಯಿಂದಾಗಿ
2700 ಡಿಗ್ರಿ ಸೆಲ್ಷಿಯಸ್ ಉಷ್ಣತೆಯನ್ನು ಅನುಭವಿಸುವ ಸ್ಥಿತಿ ಅದರ ಪಾಲಿಗಿತ್ತು. ಮೈನಡುಗಿಸುವ ಆ ಉಷ್ಣತೆಯಿಂದ ನೌಕೆಯ ಒಳಭಾಗವನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸಲಿದ್ದದ್ದು ಹೊಸಬಗೆಯ ತಂತ್ರಜ್ಞಾನದ ಬಳಕೆಯಿಂದ ನಿರ್ಮಾಣವಾದ ನೌಕೆಯ ಶಾಖಕವಚ.

ಅಂತಿಮವಾಗಿ ಪ್ಯಾರಾಚ್ಯೂಟ್‌ಗಳ ನೆರವಿನೊಡನೆ ಆರ್ಟೆಮಿಸ್ 1 ಕ್ಯಾಲಿಫೋರ್ನಿಯಾ ರಾಜ್ಯದ ಕರಾವಳಿಯ ಸಮೀಪದಲ್ಲಿ ಶಾಂತ (ಪೆಸಿಫಿಕ್) ಸಾಗರದ ಮೇಲೆ ಇಳಿಯುವ ಕಾರ್ಯಕ್ರಮವಿತ್ತು. ಆದರೆ ಈ ಕಾರ್ಯಗಳೆಲ್ಲವೂ ಬರುವ ಕೆಲವು ವಾರಗಳಲ್ಲಿ ಯಾವಾಗ ಸಾಧಿಸುವುವೋ ಎಂಬ ಬಗ್ಗೆ ಖಚಿತವಾಗಿ ಹೇಳಲು ಇಂದು ಸಾಧ್ಯವಿಲ್ಲ.

ಈಗ ಈ ಆರ್ಟೆಮಿಸ್ ಕಾರ್ಯಕ್ರಮದ ಉದ್ದೇಶವೇನು? ಐದು ದಶಕಗಳ ಬಳಿಕ ಮಾನವ ಮತ್ತೆ ಈ ಕಾರ್ಯಕ್ರಮದ ಮೂಲಕ ಚಂದ್ರನತ್ತ ತೆರಳಲು ಹಪಹಪಿಸುತ್ತಿರುವುದಕ್ಕೆ ಕಾರಣವೇನು? ಈ ಆರ್ಟೆಮಿಸ್ ಎಂಬ ಪದದ ಅರ್ಥವೇನು?

2025ರಲ್ಲಿ ಚಂದ್ರನಲ್ಲಿಗೆ ಹಿಂದಿರುಗಿ ‘ಮೊದಲ ಮಹಿಳೆ’ಯನ್ನು ಅಲ್ಲಿ ಇಳಿಸುವುದು ಮತ್ತು ಹಿಂದಿನ ಅಪಾಲೋ ಗಗನಯಾತ್ರಿಗಳಂತೆ ಚಂದ್ರನಲ್ಲಿ ಕೇವಲ ಎರಡು ಮೂರು ದಿನ ತಂಗಿ ನಂತರ ಮತ್ತೆ ಭೂಮಿಯತ್ತ ಪಯಣ ಮಾಡುವುದಷ್ಟನ್ನೇ ಸಾಧ್ಯಮಾಡದೇ ಕನಿಷ್ಠ ಪಕ್ಷ ಒಂದು ವಾರವಾದರೂ ಇಬ್ಬರು ಗಗನಯಾತ್ರಿಗಳು ಚಂದ್ರನ ಮೇಲೆ ತಂಗುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಮಾನವರು ಅಲ್ಲಿ ಕಾಯಂ ಆಗಿ ನೆಲೆಸುವ ಕಾರ್ಯಕ್ಕೆ ನೆರವಾಗುವುದು ಆರ್ಟೆಮಿಸ್ ಕಾರ್ಯಕ್ರಮದ ಉದ್ದೇಶಗಳಾಗಿವೆ.

ಚಂದ್ರನ ಅನ್ವೇಷಣೆಯನ್ನು, ಅದರಲ್ಲೂ ಚಂದ್ರನ ಧ್ರುವ ಪ್ರದೇಶಗಳ ಅನ್ವೇಷಣೆಯನ್ನು ಮುಂದುವರಿಸುವುದು, ಅಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಹಾಗೂ ಚಂದ್ರನನ್ನು ಒಂದು ಜಿಗಿಯುವ ಹಲಗೆಯಂತೆ ಬಳಸಿಕೊಂಡು ಮಾನವನ ಮುಂದಿನ ಗುರಿಯಾದ ಮಂಗಳಗ್ರಹದತ್ತ ಪಯಣಿಸುವುದು, ಈ ಕಾರ್ಯಗಳಿಗೂ ಆರ್ಟೆಮಿಸ್ ಕಾರ್ಯಕ್ರಮ ಎಡೆಮಾಡಿಕೊಡಲಿದೆ.

ಪ್ರಾಚೀನ ಗ್ರೀಕ್ ಪುರಾಣದಲ್ಲಿ ‘ಆರ್ಟೆಮಿಸ್’ ಎಂಬುವಳು ಪ್ರಾಚೀನ ಗ್ರೀಕ್ ಸೂರ್ಯದೇವತೆ ಅಪಾಲೋನ ಅವಳಿ ಸೋದರಿ. ಚಂದ್ರನಲ್ಲಿಗೆ ಮಾನವರನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಕಳುಹಿಸಿದ ಅಮೆರಿಕದ ಕಾರ್ಯಕ್ರಮ ‘ಅಪಾಲೋ’. ಹೀಗಾಗಿ ‘ಅಪಾಲೋ’ ಕಾರ್ಯಕ್ರಮದ ನಂತರದ ಚಂದ್ರ ಅನ್ವೇಷಣಾ ಕಾರ್ಯಕ್ರಮಕ್ಕೆ ‘ಆರ್ಟೆಮಿಸ್’ ಎಂದು ಅಮೆರಿಕ ಹೆಸರಿಟ್ಟಿರುವುದು ಸಮಂಜಸವಾಗಿದೆ.

(ಲೇಖಕರು ‘ಇಸ್ರೊ’ನ ನಿವೃತ್ತ ವಿಜ್ಞಾನಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.