ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ಫೊಸಿಸ್‌ಗೆ ₹380 ಶತಕೋಟಿ GST; ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದ ಸರ್ಕಾರ

Published : 6 ಆಗಸ್ಟ್ 2024, 10:24 IST
Last Updated : 6 ಆಗಸ್ಟ್ 2024, 10:24 IST
ಫಾಲೋ ಮಾಡಿ
Comments

ನವದೆಹಲಿ: ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಂಚನೆಗೆ ಸಂಬಂಧಿಸಿದಂತೆ ದೇಶದ ಎರಡನೇ ಅತಿದೊಡ್ಡ ಐ.ಟಿ ಕಂಪನಿ ಇನ್ಫೊಸಿಸ್‌ಗೆ ಕೇಂದ್ರ ಸರ್ಕಾರವು ತೆರಿಗೆ ರಿಯಾಯಿತಿ ಸೌಲಭ್ಯ ನೀಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತನ್ನ ಸಾಗರೋತ್ತರ ಶಾಖೆಗಳ ಸೇವೆಗೆ ಸಂಬಂಧಿಸಿದಂತೆ ಇನ್ಫೊಸಿಸ್‌ ಕಂಪನಿಯು ₹32,403 ಕೋಟಿ ಜಿಎಸ್‌ಟಿ ವಂಚನೆ ಎಸಗಿದ ಆರೋಪ ಹೊತ್ತಿದೆ. ಈ ಸಂಬಂಧ ಕರ್ನಾಟಕದ ಜಿಎಸ್‌ಟಿ ವಿಭಾಗದಿಂದ ಕಂಪನಿಗೆ ನೋಟಿಸ್‌ ನೀಡಲಾಗಿತ್ತು. ಸದ್ಯ ಈ ಪ್ರಕರಣವನ್ನು ಕೇಂದ್ರ ಮಟ್ಟದ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯಕ್ಕೆ (ಡಿಜಿಜಿಐ) ವರ್ಗಾಯಿಸಲಾಗಿದೆ.

ದೇಶದ 2ನೇ ಅತಿ ದೊಡ್ಡ ಐಟಿ ಕಂಪನಿಯಾಗಿರುವ ಇನ್ಫೊಸಿಸ್‌ಗೆ ಜಿಎಸ್‌ಟಿ ಕಾನೂನು ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಉತ್ತರಿಸಲು ಕಂಪನಿ 10 ದಿನಗಳ ಕಾಲಾವಕಾಶ ಕೇಳಿದೆ. 

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಇನ್ಫೊಸಿಸ್‌ನ ಷೇರು ಬೆಲೆ ಮಂಗಳವಾರ ಶೇ 1.2ರಷ್ಟು ಕುಸಿದಿದೆ. ದಿನದ ಆರಂಭದಲ್ಲಿ ಕಂಪನಿಯ ಷೇರುಗಳ ಬೆಲೆ ಶೇ 1.6ರಷ್ಟು ಬೆಳವಣಿಗೆ ಕಂಡಿತ್ತು. ನಂತರ ಈ ಲಾಭಾಂಶ ಶೇ 0.3ಕ್ಕೆ ಇಳಿಯಿತು.

2017ರ ಜುಲೈನಿಂದ 2021–22ರ ವರೆಗೆ ಇನ್ಪೊಸಿಸ್‌ ಇಷ್ಟು ಮೊತ್ತದ ವಂಚನೆ ಎಸಗಿರುವ ಆರೋಪವಿದೆ. ಈ ಮೊತ್ತವು 2024-25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯು ಗಳಿಸಿರುವ ವರಮಾನದ ಶೇ 85ರಷ್ಟಿದೆ. 

ಷೇರು ಪೇಟೆಗೆ ಆ. 3ರಂದು ಕಂಪನಿ ಸಲ್ಲಿಸಿದ ಮಾಹಿತಿ ಪ್ರಕಾರ, ಆರ್ಥಿಕ ವರ್ಷ 2017–18ರ ತೆರಿಗೆಗೆ ಸಂಬಂಧಿಸಿದಂತೆ ₹38.98 ಶತಕೋಟಿ ಮೊತ್ತಕ್ಕೆ ಅಂತಿಮಗೊಳಿಸಲಾಗಿತ್ತು ಎಂದಿದೆ. ಕೇಂದ್ರ ಹಾಗೂ ರಾಜ್ಯಗಳಿಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಬಾಕಿಯನ್ನೂ ಪಾವತಿಸಲಾಗಿದೆ ಎಂದೂ ಕಂಪನಿ ಈ ಹಿಂದೆ ಹೇಳಿತ್ತು ಎಂದು ವರದಿಯಾಗಿದೆ.

ಈ ಬೆಳವಣಿಗೆ ಕುರಿತಂತೆ ಇನ್ಫೊಸಿಸ್‌ ಹಾಗೂ ಕೇಂದ್ರ ಹಣಕಾಸು ಇಲಾಖೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (1 ಅಮೆರಿಕನ್ ಡಾಲರ್‌= ₹83.8725)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT