ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ದಸರಾದಲ್ಲಿ ರ್‍ಯಾಪ್‌ ಅಬ್ಬರ: ಬಾದ್‌ಷಾ ತಾಳಕ್ಕೆ ಕುಣಿದ ಮೈಸೂರು

ಮಾಧುರ್ಯ ಹೆಚ್ಚಿಸಿದ ಜಸ್ಕರಣ್‌, ಸಂಗೀತಾ
Published : 8 ಅಕ್ಟೋಬರ್ 2024, 17:31 IST
Last Updated : 8 ಅಕ್ಟೋಬರ್ 2024, 17:31 IST
ಫಾಲೋ ಮಾಡಿ
Comments

ಮೈಸೂರು: ಯುವ ದಸರಾ ವೇದಿಕೆಯಲ್ಲಿ ಮಂಗಳವಾರ ರಾತ್ರಿ ‘ಬಾದ್‌ಷಾ’ ತಾಳಕ್ಕೆ ಯುವಜನರು ಹುಚ್ಚೆದ್ದು ಕುಣಿದರು. ಎದೆಯ ಬಡಿತ ಹೆಚ್ಚಿಸುವ ಬೀಟ್‌ಗಳಿಗೆ ಮೈ–ಕೈ ಕುಣಿಸಿದರು. ಜಸ್ಕರಣ್‌ ಸಿಂಗ್‌, ಸಂಗೀತಾ ರವೀಂದ್ರನಾಥ್‌ ಅವರ ಗಾಯನ ಮಾಧುರ್ಯವೂ ತಂಪನ್ನೆರೆಯಿತು.

ರಾತ್ರಿ 9ರ ಸುಮಾರಿಗೆ ‘ನಮಸ್ಕಾರ ಮೈಸೂರು’ ಎನ್ನುತ್ತಲೇ ವೇದಿಕೆಯನ್ನು ಆವರಿಸಿದ 38ರ ಹರೆಯರ ರ್‍ಯಾಪರ್‌ ಆದಿತ್ಯ ಪ್ರತೀಕ್‌ ಸಿಂಗ್‌ ಅಲಿಯಾಸ್‌ ‘ಬಾದ್‌ಷಾ’, ತಮ್ಮ ಬತ್ತಳಿಕೆಯ ಒಂದೊಂದೇ ಹಾಡಿನ ಬಾಣವನ್ನು ಪ್ರೇಕ್ಷಕರ ಹೃದಯಕ್ಕೆ ನಾಟಿಸಿದರು. ಚಳಿಯಲ್ಲೂ ನೋಡುಗರ ಮೈಯಲ್ಲಿ ಬೆವರಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು ಕರತಾಡನದ ಮೂಲಕ ಬೆಂಬಲಿಸಿದರು. 'ಕಿಂಗ್ ಬಾದ್ ಷಾ', 'ಲವ್ ಯೂ ಷಾ' ಬರಹವುಳ್ಳ ಫಲಕಗಳನ್ನು ಪ್ರೇಕ್ಷಕರು ಹಿಡಿದು ಅಭಿಮಾನ ತೋರಿದರು.

‘ಯೇ ಲಡ್ಕೀ ಪಾಗಲ್‌ ಹೈ’, ‘ ತೂ ತೋ ಜಾನ್ತಿ ಹೈ’, ‘ ಸಯ್ಯಾನೇ ಜೈಸಿ, ಮೇ ಪಾನಿ ಪಾನಿ ಹೋಗಯಿ’ ‘ರೂಪ್‌ತೇರಾ ಮಸ್ತಾನ, ಪ್ಯಾರ್ ಮೇರಾ ದಿವಾನ’ ‘ ಹೇ ಗರ್ಮಿ’ ಮೊದಲಾದ ಗೀತೆಗಳನ್ನು ಪ್ರಸ್ತುತಪಡಿಸಿದರು. ಜೊತೆಗೆ ಬಾಲಿವುಡ್‌ನ ಕೆಲವು ಜನಪ್ರಿಯ ಗೀತೆಗಳ ರೀಮಿಕ್ಸ್‌ ಸಹ ವೇದಿಕೆಯಲ್ಲಿ ಮೂಡಿಬಂದವು. ಒಂದೊಮ್ಮೆ ಜನರ ಮಧ್ಯದಲ್ಲೇ ತೆರಳಿ ಹಾಡಿದರು. ಈ ಸಂದರ್ಭ ಪ್ರೇಕ್ಷಕರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಯಿತು.

‘ ನಾನು ಹಾಡುಗಾರನಲ್ಲ, ಬರಹಗಾರ. ನಾನೂ ನಿಮ್ಮಲ್ಲಿ ಒಬ್ಬ’ ಎಂದು ಕನ್ನಡದಲ್ಲೇ ಮಾತನಾಡುತ್ತ ಕನ್ನಡಿಗರ ಮನಗೆದ್ದ ಬಾದ್‌ಷಾ, ವೇದಿಕೆಯಲ್ಲಿ ರಾಜಕುಮಾರ ಚಿತ್ರದ ‘ ಗೊಂಬೆ ಹೇಳುತೈತೆ’ ಗೀತೆ ಪ್ರಸಾರ ಮಾಡಿ ಗೌರವ ಸಲ್ಲಿಸಿದರು. ಹಿನ್ನಲೆಯಲ್ಲಿ ಪುನೀತ್‌ ರಾಜಕುಮಾರ್‌ ಭಾವಚಿತ್ರ ಕಂಡು ಪ್ರೇಕ್ಷಕರು ಭಾವುಕರಾದರು. ಬಾದ್ ಷಾ 'ವಿ ಲವ್ ಯೂ ಅಪ್ಪು' ಎನ್ನುತ್ತಿದ್ದಂತೆ ಅಪ್ಪು ಪರ ಘೋಷಣೆ ಮುಳಗಿತು.

ಗಾಯಕಿ ಶಾರ್ವಿ ಯಾದವ್‌ ಹಾಗೂ ಸಹ ಕಲಾವಿದರು ಬಾದ್‌ಷಾಗೆ ಸಾಥ್ ನೀಡಿದರು.

ಜಸ್ಕರಣ್‌ ಸಿಂಗ್

ಜಸ್ಕರಣ್‌ ಸಿಂಗ್

ಜಸ್ಕರನ್‌ ಮಾಧುರ್ಯ: ಇದಕ್ಕೂ ಮುನ್ನ ಯುವ ಗಾಯಕ ಜಸ್ಕರಣ್‌ ಸಿಂಗ್ ಕನ್ನಡದ ಮಧುರ ಗೀತೆಗಳ‌ ಮೂಲಕ ಕಾರ್ಯಕ್ರಮದ ಮಾಧುರ್ಯ ಹೆಚ್ಚಿಸಿದರು.

'ಜಗವೇ ನೀನು ಗೆಳತಿಯೇ, ನನ್ನ ಜೀವದ ಒಡತಿಯೇ' ಹಾಡಿನ ಮೂಲಕ ವೇದಿಕೆಗೆ ಬಂದ ಜಸ್ಕರಣ್‌ ಸುಪ್ರಸಿದ್ದ ಕನ್ನಡದ ಹಾಡುಗಳಿಗೆ ಧ್ವನಿಯಾದರು. ಪಂಜಾಬಿ ಯುವಕನ ಕನ್ನಡದ ಆಲಾಪ, ಮುದ್ದಾದ ಮಾತುಗಳಿಗೆ ಪ್ರೇಕ್ಷಕರು ಕರಗಿ ಹೋದರು. ‘ಕೃಷ್ಣ ಪ್ರಣಯ ಸಖಿ’ ಚಿತ್ರದ 'ಜೇನ ದನಿಯೋಳೆ, ಮೀನ ಕಣ್ಣೋಲೆ' ಎಂಬ ಹಿಟ್ ಹಾಡಿಗೆ ಹುಚ್ಚೆದ್ದು ಕುಣಿದರು.

ಸ್ಯಾಂಡಲ್ ವುಡ್ ಗಾಯಕಿ ಸಂಗೀತಾ ರವೀಂದ್ರನಾಥ್ ಮಸಾಲೆ ಹಾಡುಗಳು ಪ್ರೇಕ್ಷಕರ ಹುಕ್ ಸ್ಟೆಪ್‌ಗೆ ಕಿಚ್ಚು ಹಚ್ಚಿತು. ಬೆಳಕಿನ ಕವಿತೆ ಹಾಡಿನ ಮೂಲಕ ವೇದಿಕೆಗೆ ಬಂದ ಅವರು, 'ಹೃದಯಕ್ಕೆ ಹೆದರಿಕೆ, ಹೀಗೆ ನೋಡಿದರೆ' ಮೊದಲಾದ ಪ್ರೇಮ ಗೀತೆಗಳ ಮೂಲಕ ಹೃದಯ ಗೆದ್ದರು. ಆತ್ರೇಯಾ ತಂಡ ಪ್ರದರ್ಶಿಸಿದ ನೃತ್ಯವು ಗಮನ ಸೆಳೆಯಿತು.

ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ತಂಡ ಹಾಗೂ ಯುವ ಸಂಭ್ರಮದಲ್ಲಿ ಆಯ್ದ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು.

ಗಾಯಕಿ ಸಂಗೀತಾ ರವೀಂದ್ರನಾಥ್

ಗಾಯಕಿ ಸಂಗೀತಾ ರವೀಂದ್ರನಾಥ್

ನೃತ್ಯ ಪ್ರದರ್ಶನ ಮೊಟಕು: ಕಲಾವಿದರ ಪ್ರತಿರೋಧ

ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ ಎಂದು ಸ್ಥಳೀಯ ನೃತ್ಯಗಾರರು ವೇದಿಕೆಯಲ್ಲೇ ಪ್ರತಿಭಟಿಸಿದರು. ಈ ವೇಳೆ ಆಯೋಜಕರು ಹಾಗೂ ಕಲಾವಿದರ ನಡುವೆ ನೂಕಾಟ ತಳ್ಳಾಟವಾಯಿತು.

ಬಾದ್ ಷಾ ಕಾರ್ಯಕ್ರಮಕ್ಕೆ ಮೊದಲು ಸ್ಥಳೀಯ ನಿರ್ದೇಶಕರ ತಂಡ ನೃತ್ಯ ಪ್ರದರ್ಶನ ನೀಡುತ್ತಿತ್ತು. ಬಾದ್ ಷಾ ಕಾರ್ಯಕ್ರಮಕ್ಕಾಗಿ ಅವರ ನೃತ್ಯವನ್ನು ಅರ್ಧದಲ್ಲೇ ನಿಲ್ಲಿಸಿ, ವೇದಿಕೆ ತೆರವುಗೊಳಿಸಲು ಆಯೋಜಕರು ತಿಳಿಸಿದರು. ಸಿಟ್ಟಾದ ಕಲಾವಿದರು ಕ್ರಮದ ಬಗ್ಗೆ ಪ್ರಶ್ನಿಸಿ ವೇದಿಕೆಯಿಂದ ತೆರಳಲು ನಿರಾಕರಿಸಿದರು. ಅವರನ್ನು ಪೊಲೀಸರ ಮೂಲಕ ವೇದಿಕೆಯ ಹಿಂಭಾಗಕ್ಕೆ ಕರೆದೊಯ್ದರು. ಅಲ್ಲಿಯೂ ಆಯೋಜಕರ ನಿರ್ಧಾರ ವಿರೋಧಿಸಿ, ಪ್ರತಿಭಟನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT