ದಾಂಡೇಲಿ, ಜೋಯಿಡಾ ಅಂದಾಕ್ಷಣ ಥಟ್ಟನೆ ನೆನಪಾಗೋದು ದಟ್ಟ ಕಾಡು. ಇಲ್ಲಿ ಕೆಲಕಾಲ ಮೌನವಾಗಿ ಕುಳಿತರೆ ಕಾನನದೊಳಗೆ ಅಪರಿಚಿತರು ಗಹಗಹಿಸಿ ನಕ್ಕಂತೆ ಶಬ್ದ ಕೇಳುತ್ತದೆ. ಸಾಮೂಹಿಕವಾಗಿ ಕೇಳುವ ಈ ವಿಕಟ ಶಬ್ದಕ್ಕೆ ಹೊಸಬರಾದರೆ ಬೆಚ್ಚಿಬೀಳುವುದು ನಿಶ್ಚಿತ.

ಅಂದಹಾಗೆ ಅದು ಮಂಗಟ್ಟೆ (ಹಾರ್ನ್ಬಿಲ್) ಹಕ್ಕಿಗಳ ಕೂಗು! ಒಮ್ಮೆ ಕತ್ತೆತ್ತಿ ನೋಡಿದರೆ ಆಗಸದಲ್ಲಿ ತೇಲುತ್ತಾ ಬರುವ ಮಂಗಟ್ಟೆಗಳು ಕಾಣುತ್ತವೆ. ಮರದ ಟೊಂಗೆಗಳ ಮೇಲೆ ಕುಳಿತು ಅವು ಆಹಾರ ಅರಸುವ ಪರಿಯನ್ನು ನೋಡುವುದೇ ಆನಂದ.

ಅತಿ ದೊಡ್ಡದಾದ ಉದ್ದನೆಯ ಕೊಕ್ಕು ಹೊಂದಿದ ಅಪರೂಪದ ಹಕ್ಕಿ ಇದು. ಒಮ್ಮೆ ನೋಡಿದರೆ ಸ್ಮೃತಿಪಟಲದಿಂದ ಮರೆಯಾಗುವುದೇ ಇಲ್ಲ. ಹಳೆಯ ಮರಗಳ ಪೊಟರೆಯೇ ಇವುಗಳ ಗೂಡು. ಸಂತಾನೋತ್ಪತ್ತಿ ಕಾಲದಲ್ಲಿ ಪೊಟರೆವೊಕ್ಕುವ ಹೆಣ್ಣುಹಕ್ಕಿ ತನ್ನ ಮಲ ಮತ್ತು ಪೊಟರೆಯೊಳಗೆ ಕೆರೆದು ತೆಗೆದ ಪುಡಿಯನ್ನು ಹಿಟ್ಟಿನಂತೆ ಕಲಸಿ ಕೊಕ್ಕು ಹೊರಬರುವಷ್ಟು ಜಾಗವನ್ನಷ್ಟೇ ಬಿಟ್ಟು ಪೊಟರೆಯ ಬಾಗಿಲನ್ನು ಮುಚ್ಚುತ್ತದೆ.

ಬಳಿಕ ಹೆಣ್ಣಿಗೆ ಆಹಾರ ಪೂರೈಸುವುದೇ ಗಂಡುಹಕ್ಕಿಯ ಕೆಲಸ. ಈ ವೇಳೆ ಗಂಡು ಸಾವನ್ನಪ್ಪಿದರೆ ಇಡೀ ಮಂಗಟ್ಟೆ ಕುಟುಂಬವೇ ನಾಶವಾಗುತ್ತದೆ. ಇವುಗಳ ಬದುಕು ಪಕ್ಷಿಪ್ರಿಯರಿಗೆ ವಿಸ್ಮಯ ಮೂಡಿಸುತ್ತದೆ.

ದಾಂಡೇಲಿಯ ರಜನಿ ರಾವ್ ಅವರು ಮಂಗಟ್ಟೆಯ ಈ ಜೀವನ ಕ್ರಮಕ್ಕೆ ಮನಸೋತಿದ್ದರ ಹಿಂದೆಯೂ ಕುತೂಹಲದ ಕಥನ ಇದೆ. ಅವರು ಖಾಸಗಿ ಹೈಸ್ಕೂಲ್ವೊಂದರಲ್ಲಿ ಶಿಕ್ಷಕಿಯಾಗಿದ್ದರು. ಆ ವೇಳೆ ಅರಣ್ಯ ಇಲಾಖೆಯಿಂದ ನಡೆಯುತ್ತಿದ್ದ ಹಾರ್ನ್ಬಿಲ್ ಫೆಸ್ಟಿವಲ್, ನೇಚರ್ ಕ್ಯಾಂಪ್ಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಪಕ್ಷಿತಜ್ಞರು ಮಂಗಟ್ಟೆಗಳ ಜೀವನಗಾಥೆ ಬಗ್ಗೆ ನೀಡುತ್ತಿದ್ದ ಮಾಹಿತಿಯಿಂದ ಆ ಪಕ್ಷಿ ಸಂಕುಲ ಕುರಿತು ಅವರಲ್ಲಿ ಕುತೂಹಲದ ಬೀಜ ಮೊಳಕೆಯೊಡೆಯಿತು.

ಬಳಿಕ ಸಮಯ ಸಿಕ್ಕಿದಾಗಲೆಲ್ಲಾ ಮಕ್ಕಳೊಟ್ಟಿಗೆ ಕಾಡು ಸುತ್ತುವುದು ಅವರ ಹವ್ಯಾಸವಾಯಿತು. ಈ ವೇಳೆ ಅವರಿಗೆ ದಾಂಡೇಲಿಗೆ ವಿವಿಧೆಡೆಯಿಂದ ಬರುತ್ತಿದ್ದ ನ್ಯಾಚುರಲಿಸ್ಟ್ಗಳ ಪರಿಚಯವೂ ಆಯಿತು. ಅವರೊಟ್ಟಿಗಿನ ಒಡನಾಟದಿಂದ 2017ರಲ್ಲಿ ಬೋಧನಾ ವೃತ್ತಿ ತೊರೆದು ಪೂರ್ಣ ಪ್ರಮಾಣದಲ್ಲಿ ಪಕ್ಷಿ ವೀಕ್ಷಕರಿಗೆ ಮಾರ್ಗದರ್ಶಿಯಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದರು.

ಸದ್ಯ ದಾಂಡೇಲಿಗೆ ಬರುವ ನೂರಾರು ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಮಂಗಟ್ಟೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವುಗಳ ಸಂರಕ್ಷಣೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಶಾಲಾ ಮಕ್ಕಳನ್ನು ಕಾಡಿನೊಳಗೆ ಕರೆದೊಯ್ದು ಅಲ್ಲಿನ ಜೀವ ಪರಿಸರದ ಕೌತುಕಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಇಲ್ಲಿಯವರೆಗೂ ಏಳು ಸಾವಿರಕ್ಕೂ ಹೆಚ್ಚು ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಮಾರ್ಗದರ್ಶನ ನೀಡಿರುವುದು ಅವರ ಹೆಗ್ಗಳಿಕೆ.

ಕಾನೂನು ಪದವಿ ಶಿಕ್ಷಣ ಪೂರೈಸಿರುವ ರಜನಿ ರಾವ್, ಬಿಡುವು ಸಿಕ್ಕಿದಾಗ ದಾಂಡೇಲಿ- ಹಳಿಯಾಳದ ಕೋರ್ಟ್ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪಕ್ಷಿ ವೀಕ್ಷಣೆಗೆ ಬರುವ ಪ್ರವಾಸಿಗರು, ವನ್ಯಜೀವಿ ಛಾಯಾಗ್ರಾಹಕರಿಗೆ ಮಾರ್ಗದರ್ಶನಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ.

‘ರಾಜ್ಯದ ವಿವಿಧೆಡೆಯಿಂದ ಶಾಲಾ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅವರಿಗೆ ಮಂಗಟ್ಟೆಗಳ ಬದುಕಿನ ಕಥೆ ಹೇಳುತ್ತೇನೆ. ಇಲ್ಲಿರುವ ಅಮೂಲ್ಯ ಖಗ ಸಂಪತ್ತಿನ ಬಗ್ಗೆಯೂ ವಿವರಿಸುತ್ತೇನೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಆಗಷ್ಟೇ ಭವಿಷ್ಯದಲ್ಲಿ ಪರಿಸರ, ವನ್ಯಜೀವಿಗಳ ಉಳಿವು ಸಾಧ್ಯ’ ಎನ್ನುವುದು ಅವರ ದೃಢವಾದ ನಂಬಿಕೆ.

‘ಸಂತಾನೋತ್ಪತ್ತಿ ವೇಳೆ ಮಂಗಟ್ಟೆ ಹೆಣ್ಣುಹಕ್ಕಿ 110 ದಿನಗಳ ಕಾಲ ಗೂಡಿನಲ್ಲಿ ಇರುತ್ತದೆ. ಅಲ್ಲಿಯವರೆಗೂ ಅದು ಹೊರಗೆ ಬರುವುದಿಲ್ಲ. ಆಗ ಅದರ ಪುಕ್ಕಗಳು ಉದುರಿ ಹೋಗುತ್ತವೆ. ಅದಕ್ಕೆ ಆಹಾರ ತಂದುಕೊಡಲು ಗಂಡುಹಕ್ಕಿ ಹತ್ತಾರು ಕಿಲೊಮೀಟರ್ ದೂರ ಹೋಗುತ್ತದೆ. ಮಂಗಟ್ಟೆ ಸರ್ವಭಕ್ಷಕ ಪಕ್ಷಿ. ಅವುಗಳ ಆಹಾರದ ಕ್ರಮವನ್ನೂ ದಾಖಲಿಸಿದ್ದೇನೆ’ ಎನ್ನುತ್ತಾರೆ ಅವರು.

ಸದ್ಯ ಕರ್ನಾಟಕದಲ್ಲಿ ನಾಲ್ಕು ಪ್ರಭೇದಕ್ಕೆ ಸೇರಿದ ಮಂಗಟ್ಟೆ ಹಕ್ಕಿಗಳು ಕಾಣಸಿಗುತ್ತವೆ. ಆ ಪೈಕಿ ದೊಡ್ಡ ದಾಸ ಮಂಗಟ್ಟೆಗಳು ದಾಂಡೇಲಿಯ ಪ್ರಮುಖ ಆಕರ್ಷಣೆ. ಸದ್ಯ ಇಲ್ಲಿ ಅವುಗಳ ಸಂಖ್ಯೆಯೂ ಹೆಚ್ಚಾಗಿದೆ. ಪಕ್ಷಿ ವೀಕ್ಷಕರಿಗೆ ಎಲ್ಲೆಡೆ ಕಂಡು ಬರುತ್ತಿವೆ ಎನ್ನುವುದು ಅವರ ಖುಷಿ.

ರಜನಿ ಅವರು ಪಕ್ಷಿ ವೀಕ್ಷಣೆ ಬಗ್ಗೆ ನೀಡುವ ಮಾರ್ಗದರ್ಶನದ ಬಗ್ಗೆ ಪ್ರವಾಸಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಮಂಗಟ್ಟೆಗಳ ವಿಸ್ಮಯ ಬದುಕಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ಅವರು ಅವುಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ನೀಡಿದ ಮಾಹಿತಿಯು ನನಗೆ ಬೆರಗು ಮೂಡಿಸಿತು. ಪಕ್ಷಿ ಸಂಕುಲದ ಉಳಿವಿನ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಇತ್ತೀಚೆಗೆ ದಾಂಡೇಲಿಗೆ ಭೇಟಿ ನೀಡಿದ್ದ ಬೆಂಗಳೂರಿನ ಅನನ್ಯ ಟ್ರಸ್ಟ್ನ ಸದಸ್ಯೆ ಹರ್ಷಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.