ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಹುಲ್ ಗಾಂಧಿ

ಲೋಕಸಭೆಯಲ್ಲಿ ರಾಹುಲ್‌ ಅಬ್ಬರ: ಸದನ ಸಮರ
Published 1 ಜುಲೈ 2024, 10:40 IST
Last Updated 1 ಜುಲೈ 2024, 10:40 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಲೋಕಸಭೆಯಲ್ಲಿ ಮೊದಲ ಭಾಷಣ ಮಾಡಿದ ರಾಹುಲ್‌ ಗಾಂಧಿ ಅವರು ಆಡಳಿತರೂಢ ಬಿಜೆಪಿ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು. ‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದು ಟೀಕಾಪ್ರಹಾರ ನಡೆಸಿದರು. ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.

ಸದನದಲ್ಲಿ ರಾಹುಲ್‌ ಅವರೊಂದಿಗಿನ ಮೊದಲ ನೇರ ಮುಖಾಮುಖಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಇಡೀ ಹಿಂದೂ ಸಮಾಜವು ಹಿಂಸಾ ಪ್ರವೃತ್ತಿಯಿಂದ ಕೂಡಿದೆ ಎಂದು ಕರೆಯುವುದು ತುಂಬಾ ಗಂಭೀರ ವಿಷಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಪಕ್ಷ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ ಮೇಲೆ ಕಾಂಗ್ರೆಸ್‌ ನಾಯಕನ ಮೊನಚಾದ ದಾಳಿಗೆ ಪ್ರಧಾನಿ ಎರಡು ಸಲ ಮಧ್ಯಪ್ರವೇಶಿಸಿ ಆಕ್ಷೇಪಿಸಿದರು. 

ರಾಹುಲ್‌ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರು ಪದೇ ಪದೇ ಅಡ್ಡಿಪಡಿಸಿದರು. 6–7 ಸಚಿವರು ಎದ್ದು ನಿಂತು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಆಗ ರಾಹುಲ್‌ ಜೋರಾಗಿ, ‘ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿಲ್ಲ. ಹಿಂದೂ ಯಾವತ್ತೂ ದ್ವೇಷ ಹಾಗೂ ಹಿಂಸೆಯನ್ನು ಹರಡುವುದಿಲ್ಲ. ಮೋದಿ ಎಂದರೆ ಇಡೀ ಹಿಂದೂ ಸಮಾಜವಲ್ಲ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತದೆ’ ಎಂದು ತಿರುಗೇಟುಕೊಟ್ಟರು.

ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಮುಖಂಡ ಸುಧಾಂಶು ತ್ರಿವೇದಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಹುಲ್‌ ಹೇಳಿಕೆಯನ್ನು ಖಂಡಿಸಿದರು.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ರಾಹುಲ್‌ ಸುಮಾರು 100 ನಿಮಿಷಗಳ ಮಾತನಾಡಿದರು. ರಾಹುಲ್‌ ಭಾಷಣವನ್ನು ತಾಯಿ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. 

ವಿಪಕ್ಷ ನಾಯಕ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ‘ಭಾರತ್‌ ಮಾತಾಕಿ ಜೈ’, ‘ಮೋದಿ ಮೋದಿ’ ಎಂಬ ಘೋಷಣೆಗಳನ್ನು ಕೂಗಿದರು. ಬಳಿಕ ‘ಜೈ ಸಂವಿಧಾನ’ ಎಂದೂ ಸೇರಿಸಿದರು. ಸಂವಿಧಾನ ಪ್ರತಿ ಪ್ರದರ್ಶಿಸಿದ ರಾಹುಲ್‌, ಬಿಜೆಪಿ ಮುಖಂಡರ ಬಾಯಲ್ಲಿ ‘ಜೈ ಸಂವಿಧಾನ’ ಎಂಬ ಹೇಳಿಕೆ ಬರುವಂತೆ ಮಾಡಿದ್ದೇವೆ. ಇದು ನಮ್ಮ ಸಾಧನೆ’ ಎಂದು ಪ್ರತಿಪಾದಿಸಿದರು. 

ಶಿವನ ಚಿತ್ರ ಪ್ರದರ್ಶಿಸಿ ಅವರು ಮಾತು ಮುಂದುವರಿಸಿದರು. ಆಗ ಲೋಕಸಭಾಧ್ಯಕ್ಷ ಓಂ ಬಿರ್ಲಾ, ‘ನಿಯಮಗಳ ಪ್ರಕಾರ ಸದನದಲ್ಲಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ’ ಎಂದು ಸೂಚಿಸಿದರು. ‘ಶಿವನ ಈ ಚಿತ್ರವು ಅಹಿಂಸೆಯ ಸಂದೇಶ ನೀಡುತ್ತದೆ. ಶಿವ ಇಡೀ ದೇಶದ ಜನರ ಹೃದಯದಲ್ಲಿದ್ದಾನೆ’ ಎಂದು ರಾಹುಲ್‌ ವ್ಯಾಖ್ಯಾನಿಸಿದರು. ಭಗವಾನ್ ಶಿವನ ಗುಣಲಕ್ಷಣಗಳನ್ನು, ಗುರುನಾನಕ್, ಬುದ್ಧ ಮತ್ತು ಮಹಾವೀರರ ಬೋಧನೆಗಳನ್ನು ಉಲ್ಲೇಖಿಸಿದ ಅವರು, ‘ದೇಶದ ಎಲ್ಲ ಧರ್ಮಗಳು ಮತ್ತು ಮಹಾನ್ ವ್ಯಕ್ತಿಗಳು ಹೆದರಬೇಡಿ, ಇತರರನ್ನು ಹೆದರಿಸಬೇಡಿ’ ಎಂದು ಹೇಳಿದ್ದಾರೆ’ ಎಂದು ನೆನಪಿಸಿದರು.

ವಿರೋಧ ಪಕ್ಷದಲ್ಲಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ಅಧಿಕಾರಕ್ಕಿಂತ ಮಿಗಿಲಾದದ್ದು ಇದೆ, ಅದುವೇ ಸತ್ಯ. ಬಿಜೆಪಿಗೆ ಬೇಕಾಗಿರುವುದು ಅಧಿಕಾರವೊಂದೇ .
–ರಾಹುಲ್ ಗಾಂಧಿ, ವಿಪಕ್ಷ ನಾಯಕ

‘10 ವರ್ಷಗಳಿಂದ ಭಾರತದ ಪರಿಕಲ್ಪನೆ ಹಾಗೂ ಸಂವಿಧಾನದ ಮೇಲೆ ಬಿಜೆಪಿ ನಿರಂತರ ದಾಳಿ ನಡೆಸಿದೆ. ಬಿಜೆಪಿಯ ಸಿದ್ಧಾಂತವನ್ನು ಲಕ್ಷಾಂತರ ಮಂದಿ ವಿರೋಧಿಸಿದ್ದಾರೆ. ವಿರೋಧ ಪಕ್ಷಗಳ ಹಲವು ನಾಯಕರು ಜೈಲಿನಲ್ಲಿದ್ದಾರೆ. ಇನ್ನು ಕೆಲವರು ಈಚೆಗೆ ಬಂದಿದ್ದಾರೆ. ಸಂವಿಧಾನದ ಉಳಿವಿಗಾಗಿ ನಮ್ಮ ಹೋರಾಟ ನಿರಂತರ’ ಎಂದು ಹೇಳಿದರು. 

‘ಇದು ಅಹಿಂಸೆಯ ದೇಶ. ಭಯದ ದೇಶವಲ್ಲ. ಎಲ್ಲ ಧರ್ಮಗಳು ಮತ್ತು ನಮ್ಮ ಎಲ್ಲ ಮಹಾಪುರುಷರು ಅಹಿಂಸೆ ಮತ್ತು ನಿರ್ಭೀತಿ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಸುಳ್ಳಿನ ಬಗ್ಗೆ ಮಾತ್ರ ಮಾತನಾಡುತ್ತಾರೆ’ ಎಂದ ಅವರು, ‘ಆಪ್ ಹಿಂದೂ ಹೋ ಹಿ ನಹೀ (ನೀವು ಹಿಂದೂಗಳಲ್ಲ)’ ಎಂದು ಬಿಜೆಪಿ ಸದಸ್ಯರಿಗೆ ಛೇಡಿಸಿದರು.

ಈ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ರಾಹುಲ್ ಹೇಳಿಕೆಯನ್ನು ಪ್ರಧಾನಿ ಖಂಡಿಸಿದರು. ಕೋಟ್ಯಂತರ ಹಿಂದೂಗಳನ್ನು ಅವಮಾನಿಸಿದ್ದಕ್ಕಾಗಿ ರಾಹುಲ್ ಅವರು ಸದನ ಹಾಗೂ ದೇಶದ ಕ್ಷಮೆಯಾಚಿಸಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಆಗ್ರಹಿಸಿದರು.

ತುರ್ತು ಪರಿಸ್ಥಿತಿ ಹಾಗೂ 1984ರ ಸಿಖ್‌ ವಿರೋಧಿ ದಂಗೆ ಬಗ್ಗೆ ಪ್ರಸ್ತಾಪಿಸಿದ ಶಾ, ‘ದೇಶದಲ್ಲಿ ಭಯೋತ್ಪಾದನೆ ಹರಡಿದ್ದು ಕಾಂಗ್ರೆಸ್‌. ಅಹಿಂಸೆ ಬಗ್ಗೆ ಮಾತನಾಡಲು ರಾಹುಲ್‌ಗೆ ಯಾವುದೇ ಹಕ್ಕಿಲ್ಲ’ ಎಂದರು. ಸಚಿವರಾದ ಕಿರಣ್ ರಿಜಿಜು ಮತ್ತು ಭೂಪೇಂದರ್ ಯಾದವ್ ಅವರು ರಾಹುಲ್‌ ಭಾಷಣದ ವಿವಿಧ ಹಂತಗಳಲ್ಲಿ ಮಧ್ಯಪ್ರವೇಶಿಸಿ ತಗಾದೆ ಎತ್ತಿದರು.

ಬಿಜೆಪಿ ಸದಸ್ಯರು ಗದ್ದಲ ತೀವ್ರಗೊಳಿಸಿದಾಗ ರಾಹುಲ್‌ ಅವರು ಕೈಯಲ್ಲಿ ‘ಅಭಯ ಮುದ್ರೆ’ ಸಂಜ್ಞೆ ಮಾಡಿ ತೋರಿಸಿದರು. ಅಯೋಧ್ಯೆ ಬಗ್ಗೆ ಉಲ್ಲೇಖಿಸುವಾಗ ಫೈಜಾಬಾದ್‌ ಸಂಸದ ಅವಧೇಶ್‌ ಪ್ರಸಾದ್‌ ಅವರ ಕೈಕುಲುಕಿ ಅಭಿನಂದಿಸಿದರು.

ರಾಹುಲ್‌ ಹೇಳಿದ್ದೇನು?

* ಪ್ರತಿಪಕ್ಷಗಳು ನಿಮ್ಮ ಶತ್ರುವಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುತ್ತೇವೆ.

* ಫೈಜಾಬಾದ್‌ನ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಅಯೋಧ್ಯೆಯ ಜನರು ಆ ಪಕ್ಷಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ತಮ್ಮ ಮನೆ ನೆಲಸಮಗೊಳಿಸಿದ್ದಕ್ಕೆ ಹಾಗೂ ಪರಿಹಾರ ನೀಡದಿರುವುದಕ್ಕೆ ಅಲ್ಲಿನ ಜನರಿಗೆ ಬಿಜೆಪಿ ವಿರುದ್ಧ ಕೋಪ ಹಾಗೂ ಅಸಮಾಧಾನವಿದೆ.

* ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಬಯಸಿದ್ದರು ಹಾಗೂ ಅದಕ್ಕಾಗಿ ಎರಡು ಸರ್ವೆಗಳನ್ನು ಮಾಡಿಸಿದ್ದರು. ಅವರು ಸೋಲುತ್ತಾರೆ ಎಂದು ಎರಡೂ ಸರ್ವೆಗಳು ತಿಳಿಸಿದ್ದವು. ತದನಂತರ ಮೋದಿ ವಾರಾಣಾಸಿಗೆ ಓಡಿಹೋದರು.

* ನೀಟ್ ವೃತ್ತಿಪರ ಪರೀಕ್ಷೆಯಿಂದ ವಾಣಿಜ್ಯ ಪರೀಕ್ಷೆಯಾಗಿ ಬದಲಾಗಿದ್ದರಿಂದ ವಿದ್ಯಾರ್ಥಿಗಳು ಅದರಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಶ್ರೀಮಂತರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ.

ಹಿಂದೂಗಳು ಹಿಂಸಾಚಾರ ಮಾಡುತ್ತಾರೆ, ಸುಳ್ಳು ಹೇಳುತ್ತಾರೆ ಮತ್ತು ದ್ವೇಷವನ್ನು ಹರಡುತ್ತಾರೆ... ಹೀಗೆ ಹೇಳುವ ಮೂಲಕ ರಾಹುಲ್ ಗಾಂಧಿ ಕೋಟ್ಯಂತರ ಹಿಂದೂಗಳನ್ನು ಅವಮಾನಿಸಿದ್ದಾರೆ. ಇದಕ್ಕಾಗಿ ಅವರು ಕ್ಷಮೆಯಾಚಿಸಬೇಕು.
–ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ರಾಹುಲ್ ಅವರು ಹಿಂದೂಗಳಿಗೆ ಘೋರ ಅವಮಾನ ಮಾಡಿದ್ದಾರೆ. ಗೃಹ ಸಚಿವರಾಗಿದ್ದಾಗ ಪಿ. ಚಿದಂಬರಂ, ಸುಶೀಲ್ ಕುಮಾರ್‌ ಶಿಂಧೆ ‘ಹಿಂದೂ ಭಯೋತ್ಪಾದನೆ’ ಎಂಬುದಾಗಿ ಉಲ್ಲೇಖಿಸಿದ್ದಾರೆ.
–ಅಶ್ವಿನಿ ವೈಷ್ಣವ್‌, ರೈಲ್ವೆ ಹಾಗೂ ವಾರ್ತಾ ಸಚಿವ
ರಾಹುಲ್ ಅವರು ಹಿಂದೂಗಳನ್ನು ಅವಮಾನಿಸಿಲ್ಲ. ಅವರು ಅದನ್ನು ಸ್ಪಷ್ಟವಾಗಿ ಹೇಳಿದರು. ಅವರು ಬಿಜೆಪಿ ಹಾಗೂ ಆ ಪಕ್ಷದ ನಾಯಕರ ಬಗ್ಗೆ ಮಾತನಾಡಿದರು
–ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ರಾಹುಲ್‌ ಅವರು ತಮ್ಮ ಭಾಷಣದಲ್ಲಿ ಸುಳ್ಳು ಮತ್ತು ದ್ವೇಷವನ್ನು ಸಂಯೋಜಿಸಿದ್ದಾರೆ. ವಿಪಕ್ಷ ನಾಯಕರಾಗಿ ಅವರ ಮೊದಲ ದಿನದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಮೂರನೇ ಸಲ ಫೇಲ್‌ ಆದ ಅವರು 2024ರ ಜನಾದೇಶವನ್ನು (ಅವರ ಸತತ ಮೂರನೇ ಸೋಲು) ಅರ್ಥ ಮಾಡಿಕೊಂಡಿಲ್ಲ.
–ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT