ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

Published : 15 ಸೆಪ್ಟೆಂಬರ್ 2024, 23:51 IST
Last Updated : 15 ಸೆಪ್ಟೆಂಬರ್ 2024, 23:51 IST
ಫಾಲೋ ಮಾಡಿ
Comments

ಮನಸ್ಸಿನಲ್ಲಿಯೇ ಸುಖ ದುಃಖ ಎಲ್ಲಾ ಐತಿ. ಬಯಕೆಯೇ ದುಃಖ ತಂದುಕೊಡತೈತಿ. ಹೀಂಗಂದರ ನೀವು ‘ಬಯಕೆನೇ ಇರಬಾರದೇನು’ ಅಂತ ಕೇಳ್ತೀರಿ. ‘ಕಲ್ಲಿಗೂ ಏನೂ ಬಯಕೆ ಇಲ್ಲ. ಬಯಕೆ ಇಲ್ಲ ಅಂದರ ನಾವೂ ಕಲ್ಲಾಗುತೀವಿ’ ಅಂತೀರಿ. ಬಯಸೋದಕ್ಕೆ ನಿಮಗೆ ಎಲ್ಲಾ ಹಕ್ಕು ಇದೆ; ಬಯಸಿ. ಆದರೆ, ಬಯಸಿದ್ದೆಲ್ಲಾ ಸಿಗತೈತಿ ಅಂತ ತಲೆಯೊಳಗೆ ಇಟ್ಟುಕೊಳ್ಳಬೇಡಿ. ಬಯಸಿದ್ದರಿಂದ ದುಃಖ ಆಗಿಲ್ಲ. ಬಯಸಿದ್ದೆಲ್ಲಾ ಸಿಗಬೇಕು ಎಂಬ ನಿಮ್ಮ ಆಸೆ ಐತಲ್ಲ, ಅದರಿಂದ ದುಃಖ ಆಗಿದೆ. ಯಾಕೆಂದರೆ, ಈ ಜಗತ್ತಿನೊಳಗೆ ಬಯಸಿದ್ದು ಸಿಗೋದಿಲ್ಲ. ಬಯಸಿದಷ್ಟು ಸಿಗೋದಿಲ್ಲ. ಬಯಸಿದಂಗೆ ಸಿಗಲ್ಲ. ಸಿಕ್ಕಿದ್ದು ಬಯಸಿದಂಗೆ ಇರಲ್ಲ. ಇದು ಜಗದ ನಿಯಮ. ಬಯಕೆಯೇ ದುಃಖಕ್ಕೆ ಕಾರಣ. ಸುಖದ ಬಯಕೆ ಇಲ್ಲೇನು? ನಮಗೆ ಸುಖ ಬ್ಯಾಡೇನು? ಅಂತ ಕೇಳಿದರೆ ಸುಖ ಬೇಕು. ನಮಗೆ ಯಾವ ವಸ್ತುಗಳು ಸುಖ ಕೊಡುತ್ತವೆ ಅನಕೋತೀವಿ, ಅವು ವಾಸ್ತವದಲ್ಲಿ ಸುಖ ಕೊಡಲು ಸಾಧ್ಯನೇ ಇಲ್ಲ. ಈ ಜಗತ್ತಿನಲ್ಲಿ ವಸ್ತುಗಳು ಸುಖ ಕೊಡುವಂತೆ ತೋರ್ತವೆ. ಆದರೆ, ದುಃಖ ಕೊಟ್ಟೇ ಹೋಗ್ತವೆ. ಯಾವುದು ಸುಖ ಅಂತ ಅನಸ್ತೈತಿ, ಅದು ಜೇನು ಮೆತ್ತಿದ ವಿಷ. ಉದಾಹರಣೆಗೆ, ನೀವು ಎರಡು ಹೋಳಿಗೆ ತಿಂತೀರಿ. ಸುಖ ಅನಸತೈತಿ. 20 ಹೋಳಿಗೆ ತಿಂದರೆ? ಎರಡು ಹೋಳಿಗೆ ಸುಖ ನೀಡಿದರೆ 20 ಹೋಳಿಗೆ ಇನ್ನೂ ಹೆಚ್ಚು ಸುಖ ಇರಬೇಕಿತ್ತಲ್ಲ. ಆದರೆ, ನೀವು ಸಾಕು ಸರಸು ಆಚೆ ಅಂತೀರಿ. ಅಂದರೆ ಸುಖ ಅನ್ನೋದು ಉಣ್ಣೋದರಲ್ಲೂ ಐತಿ, ದೂರ ಸರಿಸೋದರಲ್ಲೂ ಐತಿ. ಯಾವುದೂ ಕಾಯಂ ಸುಖ ಅಂತ ಇಲ್ಲ. ಎಲ್ಲವೂ ಸುಖದಂತೆ ತೋರುತೈತಿ. ಸುಖ ಅಂದರೆ ಸುಖ ಅಂತಲ್ಲ, ಕಡಿಮೆ ದುಃಖ. ದುಃಖ ಅಂದರೆ ದುಃಖ ಅಂತಲ್ಲ. ಕಡಿಮೆ ಸುಖ ಅಷ್ಟೆ. ಬರುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳದ ಮನಃಸ್ಥಿತಿಯೇ ದುಃಖ, ಬರುವುದನ್ನು ಒಪ್ಪಿಕೊಳ್ಳುವುದೇ ಸುಖ.

ಯಾವುದು ಬಂದೈತಿ ಅದು ಹೋಗತೈತಿ. ಇದನ್ನು ಮನುಷ್ಯ ತಿಳಕೋಬೇಕು. ಯಾವುದು ಬಯಸಿದ್ವಿ ಅದು ಸಿಗೋದಿಲ್ಲ, ಸಿಕ್ಕರೂ ಕಾಯಂ ನಮ್ ಜೊತೆ ಇರೋದಿಲ್ಲ. ಇದೇ ಸತ್ಯ. ರಷ್ಯಾದ ತತ್ವಶಾಸ್ತ್ರಜ್ಞ ಲಿಯೊ ಟಾಲ್‌ಸ್ಟಾಯ್ ಒಂದು ಕತೆ ಬರೆದಾನ. ಒಬ್ಬ ರಾಜ ಇದ್ದ. ಅವನು ಒಂದು ಡಂಗುರ ಸಾರಿದ. ‘ನಾಳೆ ನನ್ನ ಹುಟ್ಟುಹಬ್ಬ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾರು ಎಲ್ಲಿಯವರೆಗೆ ಓಡ್ತಾರೋ ಅಷ್ಟೂ ಭೂಮಿ ಅವರ ಹೆಸರಿಗೆ ಮಾಡ್ತೀನಿ’ ಅಂದ. ಮಾರನೆ ದಿನ ಇಡೀ ಊರಿನ ಜನರೆಲ್ಲಾ ಬಂದು ನಿಂತಿದ್ದರು. ಸೀಟಿ ಹೊಡೆದ ತಕ್ಷಣ ಎಲ್ಲಾ ಓಡಲು ಶುರುಮಾಡಿದರು. ಒಬ್ಬ ಮುಂದೆ ಓಡುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಅವನಿಗೆ ಬಾಯಾರಿಕೆ ಆಯಿತು, ಹಸಿವಾಯಿತು. ದಣಿವಾರಸಿಕೊಳ್ಳೋಣ ಅಂತ ಒಂದೆಡೆ ಕುಳಿತ. ಆದರೆ ಹಿಂದಿನಿಂದ ಜನ ಓಡುತ್ತಾ ಬರುತ್ತಿದ್ದರು. ಕುಳಿತರೆ ಕಷ್ಟ ಅಂತ ಮತ್ತೆ ಓಡತೊಡಗಿದ. ಮಧ್ಯಾಹ್ನನೂ ಊಟಿಲ್ಲ, ನೀರಿಲ್ಲ, ಸಂಜೆನೂ ಏನೂ ಅಲ್ಲ. ಓಡಿ ಓಡಿ ಸಂಜೆಯಾಗುವ ಹೊತ್ತಿಗೆ ಸತ್ತು ಬಿದ್ದ. ಸೂರ್ಯ ಮುಳುಗಿತ್ತು. ಭೂಮಿ ನಕ್ಕಿತ್ತು. ಇವನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆಗ ಭೂಮಿ ತಾಯಿ ಅಂದ್ಲು ‘ನಿನ್ನಂಗ ಬಹಳ ಮಂದಿ ಓಡ್ಯಾರ, ಓಡಿದಷ್ಟು ನಾನು ಕೊಟ್ಟಿಲ್ಲ. ಬಿದ್ದಷ್ಟೇ ಕೊಟ್ಟೇನಿ’ ಅಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT