ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Union Budget 2024 | ಕೃಷಿಗೆ ಚೈತನ್ಯ: ಸಂಶೋಧನೆಗೆ ಬಲ

Published 23 ಜುಲೈ 2024, 23:30 IST
Last Updated 23 ಜುಲೈ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಕ್ಕೆ ₹1.52 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದು  ನೈಸರ್ಗಿಕ ಕೃಷಿಗೆ ಪ್ರೋತ್ಸಾಹ, ಕೃಷಿ ಸಂಶೋಧನೆ, ಹೊಸ ತಳಿಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ದೇಶದಾದ್ಯಂತ ಮುಂದಿನ ಎರಡು ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಪ್ರಾರಂಭಿಸಲು ಅಗತ್ಯ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ಅವರಿಗೆ ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್‌ ಬೆಂಬಲ ಒದಗಿಸಲಾಗುತ್ತದೆ.

ಕೃಷಿ ಸಂಶೋಧನೆಗೆ ಬಜೆಟ್‌ನಲ್ಲಿ ಒತ್ತು ನೀಡಿದ್ದು ಈ ಕಾರ್ಯಕ್ರಮವನ್ನು ವೈಜ್ಞಾನಿಕ ಸಂಸ್ಥೆಗಳು ಮತ್ತು ಆಸಕ್ತ ಗ್ರಾಮ ಪಂಚಾಯಿತಿಗಳ ಮೂಲಕ ಜಾರಿಗೊಳಿಸಲಾಗುತ್ತದೆ.

ಇತರ ಕೊಡುಗೆಗಳು:

* ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು 10 ಸಾವಿರ ‘ಜೈವಿಕ– ಒಳಸುರಿ ಸಂಪನ್ಮೂಲ ಕೇಂದ್ರ’ಗಳನ್ನು (ಬಯೊ ಇನ್‌ಪುಟ್‌ ರಿಸೋರ್ಸ್‌ ಸೆಂಟರ್ಸ್‌) ಸ್ಥಾಪನೆ

* ಕೃಷಿ ಉತ್ಪಾದಕತೆಯನ್ನು ವೃದ್ಧಿಸಲು ಮತ್ತು ಹವಾಗುಣ ಸಹಿಷ್ಣು ಪ್ರಭೇದಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೃಷಿ ಸಂಶೋಧನಾ ವ್ಯವಸ್ಥೆಯ ಸಮಗ್ರ ಪರಿಶೀಲನೆ

* ಸರ್ಕಾರಿ ಮತ್ತು ಹೊರಗಿನ ಸಂಸ್ಥೆಗಳ ತಜ್ಞರಿಂದ ಸಂಶೋಧನಾ ಕಾರ್ಯದ ಮೇಲ್ವಿಚಾರಣೆ

*  ಅಧಿಕ ಇಳುವರಿ ನೀಡುವ ಮತ್ತು ಹವಾಗುಣ ಸಹಿಷ್ಣು ನಿರೋಧಕ ಶಕ್ತಿ ಹೊಂದಿರುವ ಹೊಸದಾದ 109 ಬಗೆಯ ಕೃಷಿ ತಳಿಗಳು ಮತ್ತು ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ತಳಿಗಳ ಬಿಡುಗಡೆಗೆ ಕ್ರಮ

* ಬೇಳೆಕಾಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಪಣ. ಅದಕ್ಕಾಗಿ ಅವುಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರುಕಟ್ಟೆಯನ್ನು ಬಲಪಡಿಸುವುದು

* ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದಂತೆ ಎಣ್ಣೆ ಕಾಳುಗಳಾದ ಸಾಸಿವೆ, ಶೇಂಗಾ, ಎಳ್ಳು, ಸೋಯಾಬೀನ್‌, ಸೂರ್ಯಕಾಂತಿ ಬೆಳೆಗಳಲ್ಲಿ ‘ಆತ್ಮನಿರ್ಭರತೆ’ ಸಾಧಿಸಲು ಕಾರ್ಯತಂತ್ರ ರೂಪಿಸಲಾಗುವುದು

* ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸಲಾಗುವುದು. ಸಂಗ್ರಹಣೆ, ಮಾರುಕಟ್ಟೆ ಸೇರಿದಂತೆ ತರಕಾರಿ ಪೂರೈಕೆ ಸರಪಳಿಗಾಗಿ ರೈತ ಮತ್ತು ಉತ್ಪಾದಕರ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ

* ಈ ವರ್ಷ ದೇಶದ 400 ಜಿಲ್ಲೆಗಳಲ್ಲಿ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ ಬಳಸಿ ಕೃಷಿ ಬೆಳೆಯ ಡಿಜಿಟಲ್‌ ಸಮೀಕ್ಷೆ ನಡೆಸಲಾಗುವುದು. ಆರು ಕೋಟಿ ರೈತರ ಮತ್ತು ಅವರ ಜಮೀನುಗಳನ್ನು ನೋಂದಾಯಿಸಲು ಕ್ರಮ

* ಐದು ರಾಜ್ಯಗಳಲ್ಲಿ ‘ಜನ್ ಸಮರ್ಥ ಆಧಾರಿತ ಕಿಸಾನ್‌ ಕ್ರೆಡಿಟ್‌ ಕಾರ್ಡ್‌’ಗಳ ವಿತರಣೆ

* ಸೀಗಡಿ ಉತ್ಪಾದನೆ ಮತ್ತು ರಫ್ತಿಗೆ ಪ್ರೋತ್ಸಾಹ ನೀಡಲಾಗುವುದು. ಸೀಗಡಿ ಸಂತಾನೋತ್ಪತ್ತಿ ಕೇಂದ್ರಗಳ ಜಾಲ ಸ್ಥಾಪನೆಗೆ ಆರ್ಥಿಕ ನೆರವು ನೀಡಲಾಗುವುದು. ನಬಾರ್ಡ್‌ ಮೂಲಕ ಸೀಗಡಿ ಸಾಕಾಣಿಕೆ, ಸಂಸ್ಕರಣೆ ಮತ್ತು ರಫ್ತಿಗೆ ಹಣಕಾಸಿನ ನೆರವು

* ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರ ನೀತಿಯನ್ನು ತರಲಾಗುವುದು. ಗ್ರಾಮೀಣ ಆರ್ಥಿಕತೆಗೆ ವೇಗ ನೀಡುವುದು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ನೀತಿ ಗುರಿಯಾಗಿರಲಿದೆ

–––

ಅಂಕಿ ಅಂಶಗಳು

₹ 1.52 ಲಕ್ಷ ಕೋಟಿ: ಕೃಷಿ ಮತ್ತು ಸಂಬಂಧಿತ ವಲಯಕ್ಕೆ ಮೀಸಲಿಟ್ಟಿರುವ ಅನುದಾನ

10,000: ಜೈವಿಕ– ಒಳಸುರಿ ಸಂಪನ್ಮೂಲ ಕೇಂದ್ರ

109: ಅಧಿಕ ಇಳುವರಿ ನೀಡುವ ತಳಿಗಳು

400: ಡಿಜಿಟಲ್‌ ಸಮೀಕ್ಷೆ ನಡೆಯುವ ಜಿಲ್ಲೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT